ನಮಸ್ಕಾರ ಸ್ನೇಹಿತರೆ,
ಬ್ಯಾಂಕ್ ಖಾತೆ ಹೊಂದುವುದರಿಂದಾಗುವ ಉಪಯೋಗಗಳೇನು? ಮತ್ತು ಬ್ಯಾಂಕ್ ಖಾತೆಗಳಲ್ಲಿ ಎಷ್ಟು ವಿಧಗಳು? ಎಂಬ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿದ್ದರೆ. ಅದಕ್ಕೆ ಉತ್ತರವೇ, ಈ ಲೇಖನ.
ಬ್ಯಾಂಕ್ ಖಾತೆ ಹೊಂದುವುದರಿಂದಾಗುವ ಉಪಯೋಗಗಳೇನು?
ಸುರಕ್ಷತೆ: ನಾವೆಲ್ಲರೂ ದುಡಿಯುತ್ತೇವೆ. ಹಣ ಗಳಿಸುತ್ತೇವೆ. ಅದರಲ್ಲಿ ಒಂದಿಷ್ಟು ಬದುಕಿಗೆ ಅಂತಾ ಖರ್ಚು ಮಾಡಿದ್ರೆ. ಉಳಿದದ್ದನ್ನ ಒಂದು ಕಡೆ ಜೋಪಾನವಾಗಿ ಇಡಬೇಕು. ನಗದು ಹಣವನ್ನ ಮನೆಗಳಲ್ಲಿ, ತಿಜೋರಿಗಳಲ್ಲಿ, ಬೇರೆ ವ್ಯಕ್ತಿಗಳ ಕೈಗಳಲ್ಲಿ ಇಟ್ಟರೆ, ಖಂಡಿತ ಅದು ಸುರಕ್ಷಿತವಾಗಿರಲಾರದು. ನಾವು ಬೆವರು ಹರಿಸಿ ಅಥವಾ ಬುದ್ದಿವಂತಿಕೆಯಿಂದ ಸಂಪಾಧಿಸಿದ ಹಣ ನೂರಕ್ಕೆ ನೂರರಷ್ಟು ಜೋಪಾನವಾಗಿ ಇರಬೇಕು ಅಂದ್ರೆ, ಅದು ಬ್ಯಾಂಕುಗಳಲ್ಲಿಟ್ಟರೆ ಮಾತ್ರ ಸಾದ್ಯ ಎನ್ನುವುದು ಸಾರ್ವತ್ರಿಕ ಸತ್ಯವಾಗಿದೆ.
ಅನುಕೂಲತೆಗಳು: ನಾವೆಲ್ಲರೂ ಬ್ಯಾಂಕುಗಳಲ್ಲಿ ಖಾತೆ ಹೊಂದಿದರೆ, ನಮಗೆ ಬೇಕಾದಾಗ ಹಣ ಡಿಪಾಸಿಟ್ ಮಾಡಬಹುದು, ತೆಗೀಬಹುದು, ಬೇಕಾದವರಿಗೆ ಹಣವನ್ನ ವರ್ಗಾಯಿಸಬಹುದು. ಆನ್ ಲೈನ್ ಶಾಪಿಂಗ್ ಮಾಡಬಹುದು. ಮೊಬೈಲ್ ನಿಂದ ಯುಪಿಐ ಪೇಮೆಂಟ್ ಮಾಡುವುದರ ಮುಖಾಂತರ, ಬೇಕಾದದ್ದನ್ನ ಖರೀಧಿಸಬಹುದು, ಬೇಕಾದ ಸರ್ವಿಸ್ಗಳನ್ನ ಪಡೆಯಬಹುದು.
ಉಳಿತಾಯ ಮತ್ತು ಗಳಿಕೆ : ನಮ್ಮ ಮನೆಗಳಲ್ಲಿ ಇಟ್ಟುಕೊಂಡಿರುವ ಹಣ ನಮಗೆ ಯಾವುದೇ ರೀತಿಯ ಗಳಿಕೆಯನ್ನುಂಟು ಮಾಡಲಾರದು, ಅದೇ ಹಣವನ್ನ ನಮ್ಮ ಸೇವಿಂಗ್ಸ್ ಖಾತೆಗಳಲ್ಲಿಟ್ಟರೆ, ಬ್ಯಾಂಕುಗಳು ನಮ್ಮ ಸೇವಿಂಗ್ಸ್ ಅಂಕೌಟ್ಗಳಲ್ಲಿ ಉಳಿಸಿದೆ ಹಣಕ್ಕೆ, ಒಂದಿಷ್ಟು ಬಡ್ಡಿಯನ್ನು ನೀಡುತ್ತವೆ. ಇದರಿಂದ ಉಳಿತಾಯ ಮತ್ತು ಒಂದಿಷ್ಟು ಗಳಿಕೆ ಎರಡೂ ಮಾಡಿದಂತಾಗುತ್ತದೆ.
ಹಣಕಾಸು ನಿರ್ವಹಣೆಗೆ ಸಹಾಯಕ: ಬ್ಯಾಂಕುಗಳಲ್ಲಿ ನಾವುಗಳು ಮಾಡಿದ ವಹಿವಾಟುಗಳು ನಮೂದಾಗಿರುತ್ತವೆ, ಅಂದರೆ ಟ್ರಾನ್ಸ್ ಆಕ್ಷನ್ಗಳು ರಿಕಾರ್ಡ್ ಆಗಿರುತ್ತವೆ. ಇದರಿಂದ ನಮ್ಮ ದೈನಂದಿನ ಖರ್ಚು-ವೆಚ್ಚುಗಳನ್ನು ಸರಿಯಾಗಿ ನಿರ್ವಹಿಸಬಹುದು.
ವಿವಿಧ ಸೇವೆಗಳ ಲಭ್ಯತೆ: ನಮ್ಮ ಬ್ಯಾಂಕ್ ಖಾತೆಗಳಿಂದ, ಆನ್ ಲೈನ್ ಫೇಮೆಂಟ್, ಕ್ರೆಡಿಟ್ ಕಾರ್ಡ್, ವಿವಿಧ ಸಾಲ-ಸೌಲಭ್ಯಗಳ ಸೇವೆಗಳನ್ನು ಪಡೆಯಬಹುದು.
ಕಾನೂನಾತ್ಮಕ ಮತ್ತು ವ್ಯವಹಾರಿಕ ಅಗತ್ಯತೆಗಳು: ಹಲವು ಸರಕಾರಿ ಯೋಜನೆಗಳ ಸೌಲಭ್ಯಗಳನ್ನು, ಧನ-ಸಹಾಯಗಳನ್ನು ಪಡೆಯಲು ಬ್ಯಾಂಕ್ ಖಾತೆಯ ಅವಶ್ಯಕತೆ ಜರೂರಾಗಿದೆ. ಅಲ್ಲದೇ, ನೌಕರರು ತಮ್ಮ ಸಂಬಳ ಪಡೆಯಲು, ಲೋನ್ ಗಳ ಮತ್ತು ಇನ್ಸುರನ್ಸ್ ಗಳ ಪ್ರಿಮಿಯಮ್ ಗಳನ್ನು ಶಿಸ್ತುಬದ್ದವಾಗಿ ನಿರ್ವಹಿಸಲು, ಬ್ಯಾಂಕ್ ಖಾತೆಗಳ ಅವಶ್ಯಕತೆ ಇದ್ದೆ ಇರುತ್ತದೆ.
ಒಂದೇ ಒಂದು ವಾಕ್ಯದಲ್ಲಿ ಹೇಳುವುದಾದರೆ, ನಮ್ಮ ಹಣದ ಸುರಕ್ಷತೆಗಾಗಿ, ಮತ್ತು ಹಣಕಾಸು ವ್ಯವಹಾರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು, ಬ್ಯಾಂಕ್ ಖಾತೆ ಅವಶ್ಯವಾಗಿರುತ್ತದೆ. ವರ್ತಮಾನದ ಪ್ರಾಪಂಚಿಕ ವ್ಯವಹಾರದಲ್ಲಿ, ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ, ಪ್ರತಿ ವಯೋಮಾನದವರು, ಉದ್ದಿಮೆಗಳು, ಸಂಘ-ಸಂಸ್ಥೆಗಳು, ಎಲ್ಲವೂ ಬ್ಯಾಂಕ್ ಖಾತೆಗಳನ್ನು ಹೊಂದುವುದು ಅನಿವಾರ್ಯವಾಗಿದೆ.
ಭಾರತದಲ್ಲಿನ ಬ್ಯಾಂಕುಗಳು ನೀಡುವ ವಿವಿಧ ರೀತಿಯ ಬ್ಯಾಂಕ್ ಖಾತೆಗಳ ಮಾಹಿತಿ ಇಲ್ಲಿದೆ.
ಬ್ಯಾಂಕ್ ಖಾತೆಗಳ ವಿಧಗಳು:
1. ಉಳಿತಾಯ ಖಾತೆ (Saving Account): ಉಳಿತಾಯ ಖಾತೆಯು ನಿಯಮಿತ ಠೇವಣಿ ಖಾತೆಯಾಗಿರುತ್ತದೆ. ಈ ಖಾತೆಯಲ್ಲಿ, ನೀವು ಉಳಿತಾಯ ಮಾಡಿದ ಹಣದ ಮೇಲೆ ಒಂದಿಷ್ಟು ಬಡ್ಡಿ ದರವನ್ನು ಗಳಿಸುತ್ತೀರಿ. ಇಲ್ಲಿ, ನೀವು ಪ್ರತಿ ತಿಂಗಳು ಮಾಡಬಹುದಾದ ವಹಿವಾಟುಗಳು, ಅಂದ್ರೆ ಟ್ರಾನ್ಸ್ಆಕ್ಷಣಗಳ ಸಂಖ್ಯೆಯನ್ನು ಮಿತಿಗೊಳಿಸಲಾಗಿರುತ್ತದೆ. ಉಳಿತಾಯ ಖಾತೆಗಳಲ್ಲಿ, ಇಬ್ಬರೂ ಅಥವಾ ಹೆಚ್ಚಿನ ಜನರು ಕೂಡಿ ತೆರೆಯುವ “ಜಂಟಿ ಉಳಿತಾಯ ಖಾತೆ”, ಹದಿನೆಂಟು ವರ್ಷಕ್ಕೂ ಕಡಿಮೆ ವಯಸ್ಸಿನವರಿಗಾಗಿ “ಮಕ್ಕಳ ಉಳಿತಾಯ ಖಾತೆ”, ಅರವತ್ತು ವರ್ಷ ದಾಟಿದವರಿಗಾಗಿ- “ಹಿರಿಯ ನಾಗರಿಕರ ಉಳಿತಾಯ ಖಾತೆ”, ಸಂಘ-ಸಂಸ್ಥೆಗಳಿಗಾಗಿ “ಸಾಂಸ್ಥಿಕ ಉಳಿತಾಯ ಖಾತೆ”, ಹೀಗೆ ಅನೇಕ ವಿಧಗಳು ಇವೆ.
2. ಚಾಲ್ತಿ ಖಾತೆ(Current Account): ವ್ಯಾಪಾರಸ್ಥರು, ಉದ್ಯಮಿಗಳು ಉದ್ಯಮದ ಹೆಸರಿನಲ್ಲಿ ತೆರೆಯಬಹುದಾದಂತಹ ಠೇವಣಿ ಖಾತೆಯೇ ಈ ಚಾಲ್ತಿ ಖಾತೆಯಾಗಿರುತ್ತದೆ. ಇಲ್ಲಿ ನಿತ್ಯದ ವಹಿವಾಟುಗಳಿಗೆ ಮಿತಿ ಇರುವುದಿಲ್ಲ. ಚಾಲ್ತಿ ಖಾತೆಗಳನ್ನು ನಿರ್ವಹಿಸಲು, ನೀವು ನಿಗದಿತ ಕನಿಷ್ಟ ಉಳಿತಾಯದ ಹಣವನ್ನು ಯಾವಾಗಲೂ ನಿರ್ವಹಿಸಬೇಕಾಗಿರುತ್ತದೆ. ಈ ಖಾತೆಗಳು ಓವರ್ಡ್ರಾಫ್ಟ್ ಸೌಲಭ್ಯವನ್ನು ಅನುಮತಿಸುತ್ತವೆ, ಅಂದರೆ, ಅಗತ್ಯವಿದ್ದಾಗ, ನಿಮ್ಮ ಖಾತೆಯಲ್ಲಿ ಲಭ್ಯವಿರುವುದಕ್ಕಿಂತ ಹೆಚ್ಚಿನ ಹಣವನ್ನು ತೆಗೆಯಬಹುದಾಗಿರುತ್ತದೆ. ಮತ್ತು ಈ ಖಾತೆಯಲ್ಲಿನ ಉಳಿತಾಯದ ಹಣಕ್ಕೆ ಯಾವುದೇ ಬಡ್ಡಿದರ ಸಿಗುವುದಿಲ್ಲ.
3. ಸಂಬಳ ಖಾತೆ(Salary Account): ಇದು ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ಒದಗಿಸುವ ಬ್ಯಾಂಕ್ ಖಾತೆಯಾಗಿರುತ್ತದೆ. ಇಲ್ಲಿ ಉದ್ಯೋಗದಾತರು ತಮ್ಮ ಉದ್ಯೋಗಿಗಳ ಪ್ರತಿ ತಿಂಗಳ ಸಂಬಳ, ಸಂಭಾವಣೆಗಳನ್ನು, ಭತ್ಯೆಗಳನ್ನು ಜಮಾ ಮಾಡುತ್ತಿರುತ್ತಾರೆ.
4. ಸ್ಥಿರ ಠೇವಣಿ ಖಾತೆ(Fixed Deposit Account): ಸಾಧಾರಣ ಉಳಿತಾಯ ಖಾತೆಯಲ್ಲಿನ ಠೇವಣಿ ಹಣಕ್ಕೆ ಭರೀ 2% ನಿಂದ 8% ವಾರ್ಷಿಕ ಬಡ್ಡಿದರಗಳನ್ನು ನೀಡುತ್ತವೆ. ಅದು ನೀವು ಉಳಿತಾಯ ಮಾಡಿದ ಹಣದ ಪ್ರಕಾರ ಹೆಚ್ಚು-ಕಡಿಮೆಯಾಗುತ್ತಿರುತ್ತದೆ. ಆದರೆ ಸ್ಥಿರ ಠೇವಣಿ ಖಾತೆಯಲ್ಲಿ, ನೀವು ನಿಶ್ಚಿತ ಅವಧಿಯವರೆಗೆ, ನಿಶ್ಚಿತ ಠೇವಣಿ ಹಣವನ್ನು ಉಳಿತಾಯ ಮಾಡಬೇಕಾಗುತ್ತದೆ. ಅದಕ್ಕೆ ಬ್ಯಾಂಕುಗಳು ಯೋಗ್ಯವಾದ ನಿಶ್ಚಿತ ಬಡ್ಡಿದರವನ್ನು ಪಾವತಿಸುತ್ತವೆ. ಇಲ್ಲಿ ಬಡ್ಡಿದರಗಳು ಠೇವಣಿ ಅವಧಿಯ ಆಧಾರದಲ್ಲಿ ನಿರ್ಧರಿತವಾಗಿರತ್ತವೆ. ಸ್ಥಿರ ಠೇವಣಿಯ ಅವಧಿ ಕನಿಷ್ಠ ಏಳು ದಿನಗಳಿಂದ ಹತ್ತು ವರುಷಗಳವರೆಗೆ ಇರುತ್ತದೆ. ಸಾಮಾನ್ಯವಾಗಿ, ಈ ಖಾತೆದಾರರು, ಸ್ಥಿರ ಠೇವಣಿ ಪಕ್ವವಾಗುವ ಮೊದಲು ಹಣವನ್ನು ಹಿಂಪಡೆಯಲು ಸಾಧ್ಯವಿರುವುದಿಲ್ಲ. ಕೆಲವು ಬ್ಯಾಂಕ್ಗಳು ಅಕಾಲಿಕವಾಗಿ ಹಿಂಪಡೆಯುವ ಸೌಲಭ್ಯವನ್ನು ನೀಡುತ್ತವೆ. ಆದರೆ ಆ ಸಂದರ್ಭದಲ್ಲಿ, ನೀವು ಗಳಿಸುವ ಬಡ್ಡಿ ದರವು ಕಡಿಮೆಯಾಗುತ್ತದೆ. ಇಲ್ಲವೆ, ಅದಕ್ಕಾಗಿ ಸ್ವಲ್ಪ ದಂಡವನ್ನು ಪಾವತಿಸಬೇಕಾಗುತ್ತದೆ.
5. ಮರುಕಳಿಸುವ ಠೇವಣಿ ಖಾತೆ (Recurring deposit): ಮರುಕಳಿಸುವ ಠೇವಣಿ (RD), ನಿಶ್ಚಿತ ಅವಧಿಯನ್ನು ಹೊಂದಿರುತ್ತದೆ. ಈ ಖಾತೆಯ ಮೂಲಕ ಬಡ್ಡಿಯನ್ನು ಗಳಿಸಲು, ಪ್ರತಿ ತಿಂಗಳು ಅಥವಾ ತ್ರೈಮಾಸಿಕಕ್ಕೆ ಒಮ್ಮೆ , ನಿಗದಿತ ಮೊತ್ತವನ್ನು ನಿಯಮಿತವಾಗಿ ಹೂಡಿಕೆ ಮಾಡಬೇಕಾಗುತ್ತದೆ. ಇಲ್ಲಿ, ಖಾತೆದಾರರು, ಕನಿಷ್ಟ 100 ರೂಪಾಯಿಗಳಿಂದ ಪ್ರಾರಂಭಿಸಬಹುದು. ಆರ್.ಡಿ ಯ ಅವಧಿ ಕನಿಷ್ಠ ಆರು ತಿಂಗಳಿಂದ ಗರಿಷ್ಟ 10 ವರ್ಷಗಳವರೆಗೆ ಆಯ್ದುಕೊಳ್ಳಬಹುದಾಗಿರುತ್ತದೆ. ಒಮ್ಮೆ ನಿಗದಿ ಪಡಿಸಿದ ಅವಧಿ ಮತ್ತು ಹೂಡಿಕೆಯ ಮೊತ್ತವನ್ನು ನಂತರದಲ್ಲಿ ಬದಲಾಯಿಸಲಾಗುವುದಿಲ್ಲ. ಅಲ್ಲದೇ, ಠೇವಣಿ ಮಾಡುವುದು ವಿಳಂಬವಾದರೆ, ಅದಕ್ಕೆ ದಂಡವನ್ನು ಪಾವತಿಸಬೇಕಾಗುತ್ತದೆ. ಆರ್ಡಿಯಲ್ಲಿನ ಹೂಡಿಕೆ ಹಣವನ್ನು ಅಕಾಲಿಕ ಹಿಂಪಡೆಯುವುದಾದರೆ, ಕಡಿಮೆ ಬಡ್ಡಿ ದರದ ರೂಪದಲ್ಲಿ ನೀವು ದಂಡವನ್ನು ತೆರಬೇಕಾಗುತ್ತದೆ.
6. ಅನಿವಾಸಿ ಭಾರತೀಯರ (NRI) ಖಾತೆಗಳು: ಭಾರತೀಯರು ಅಥವಾ ವಿದೇಶದಲ್ಲಿ ವಾಸಿಸುವ ಭಾರತೀಯ ಮೂಲದ ಜನರಿಗೆ ವಿವಿಧ ರೀತಿಯ ಬ್ಯಾಂಕ್ ಖಾತೆಗಳಿವೆ. ಈ ಖಾತೆಗಳನ್ನು ಸಾಗರೋತ್ತರ ಖಾತೆಗಳು(Overseas accounts) ಎಂದು ಕರೆಯಲಾಗುತ್ತದೆ.
ಎ) ನಾನ್ ರೆಸಿಡೆಂಟ್ ಆರ್ಡಿನರಿ ಸೇವಿಂಗ್ಸ್ ಅಕೌಂಟ್ (Non-resident ordinary savings account): NRO ಖಾತೆಗಳು ರೂಪಾಯಿ ಖಾತೆಗಳಾಗಿರುತ್ತವೆ. ಎನ್ಆರ್ಐಗಳು ಈ ಖಾತೆಗಳಲ್ಲಿ ಹಣವನ್ನು ವಿದೇಶಿ ಕರೆನ್ಸಿಯಲ್ಲಿ ಠೇವಣಿ ಮಾಡುತ್ತಾರೆ. ಆದರೆ ಆ ಹಣವನ್ನು ಚಾಲ್ತಿಯಲ್ಲಿರುವ ಕರೆನ್ಸಿ ವಿನಿಮಯ ದರದ ಮೂಲಕ ಭಾರತೀಯ ರೂಪಾಯಿಯಾಗಿ ಪರಿವರ್ತಿಸಲಾಗುತ್ತದೆ. NRIಗಳು ಭಾರತದಲ್ಲಿ ಅಥವಾ ವಿದೇಶದಲ್ಲಿ ಗಳಿಸಿದ ಹಣವನ್ನು NRO ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಡಬಹುದು. ಈ ಖಾತೆಯಲ್ಲಿನ ಠೇವಣಿ ಮುಖಾಂತರ ಗಳಿಸುವ ಆದಾಯಕ್ಕೆ ತೆರಿಗೆ ವಿಧಿಸಲಾಗುತ್ತದೆ. ಅಲ್ಲದೇ, NRIಗಳು ಈ ಖಾತೆಗಳ ಮೂಲಕ ವಿದೇಶಗಳಲ್ಲಿನ ಕೊಡುವ-ತೆಗೆದುಕೊಳ್ಳುವ ವ್ಯವಹಾರಗಳನ್ನು ನಿರ್ವಹಿಸಬಹುದಾಗಿರುತ್ತದೆ.
ಬಿ) ನಾನ್-ರೆಸಿಡೆಂಟ್ ಎಕ್ಸ್ಟರ್ನಲ್ ಸೇವಿಂಗ್ಸ್ ಅಕೌಂಟ್ (Non-resident external savings accounts): NRE ಖಾತೆಗಳು ಒಂದು ರೀತಿಯ ಅನಿವಾಸಿ ಭಾರತೀಯರ ಸ್ಥಿರ ಠೇವಣಿ ಖಾತೆಯಾಗಿರುತ್ತದೆ. ಈ ಖಾತೆಯಲ್ಲಿ ಅನಿವಾಸಿ ಭಾರತೀಯರ ವಿದೇಶಿ ಕರೆನ್ಸಿಯನ್ನು ಚಾಲ್ತಿಯಲ್ಲಿರುವ ಕರೆನ್ಸಿ ವಿನಿಮಯ ದರದ ಮೂಲಕ ಭಾರತೀಯ ರೂಪಾಯಿಯಾಗಿ ಪರಿವರ್ತಿಸಲಾಗುತ್ತದೆ. ಈ ಖಾತೆಯಲ್ಲಿನ ಸ್ಥಿರ ಠೇವಣಿ ಮುಖಾಂತರ ಗಳಿಸುವ ಬಡ್ಡಿ ದರಕ್ಕೆ ಭಾರತದಲ್ಲಿ ಯಾವುದೇ ತೆರಿಗೆ ಇರುವುದಿಲ್ಲ.
ಸಿ) ಫಾರಿನ್ ಕರೆನ್ಸಿ ನಾನ್-ರೆಸಿಡೆಂಟ್ ಖಾತೆ (Foreign currency non-resident account): ಹೆಸರೇ ಸೂಚಿಸುವಂತೆ, FCNR ಖಾತೆಗಳನ್ನು ವಿದೇಶಿ ಕರೆನ್ಸಿಯಲ್ಲಿ ನಿರ್ವಹಿಸಲಾಗುತ್ತದೆ. ಈ ಖಾತೆಗಳಿಂದ ಅನಿವಾಸಿ ಭಾರತೀಯರು ತಾವು ಗಳಿಸಿದ ಹಣವನ್ನು ವಿದೇಶಿ ಕರೆನ್ಸಿಯಲ್ಲಿಯೇ ಜಮಾ ಮಾಡಬಹುದಾಗಿರುತ್ತದೆ. ಮತ್ತು ವಿವಿಧ ರೀತಿಯ ವ್ಯವಹಾರಗಳನ್ನು ನಿರ್ವಹಿಸಬಹುದಾಗಿರುತ್ತದೆ. ಈ ಖಾತೆಯ ಮೂಲಕ ಗಳಿಸಿದ ಬಡ್ಡಿಗೆ ಭಾರತದಲ್ಲಿ ತೆರಿಗೆ ವಿಧಿಸಲಾಗುವುದಿಲ್ಲ.